ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ ಮನುಜರಿಗೆ ಸೊಗಮೀವ ಕರ್ತವ್ಯವೊಂದೆ ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ ನೂರಾರು ಆತ್ಮಗಳು ಜಡತನದ ಬಲೆಯಿಂದೆ ಬಿಡುಗಡೆಯ ಹೊಂದುವುವು - ಕುವೆಂಪು

Tuesday, May 27, 2014

ಬೆಂಗಳೂರಿನಲ್ಲಿ ಕಾವ್ಯ ಕಾಜಾಣ





 ...........ಅನೇಕ ಆಶಯಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಕಾಜಾಣ 25 ನೇ ಮೇ 2014 ರ ಭಾನುವಾರ ನಾಟಕ ಅಕಾಡೆಮಿಯ ಚಾವಡಿಯಲ್ಲಿ ‘ಕಾವ್ಯ ಕಾಜಾಣ- ೨೦೧೪ ‘ ಅನ್ನುವ ಹೆಸರಿನಲ್ಲಿ ಕವಿಗೊಷ್ಠಿಯನ್ನು ಆಯೋಜಿಸಿತ್ತು. ಈ ಕವಿಗೋಷ್ಠಿಯಲ್ಲಿ  ಕವಯತ್ರಿ ಎಚ್.ಎಲ್. ಪುಷ್ಪ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಎಲ್. ಹನುಮಂತಯ್ಯನವರು ಉದ್ಘಾಟನೆಯನ್ನು ಮಾಡಿದರು.

ಕಾಜಾಣದ ರೂವಾರಿ, ಕವಿ ಬೇಲೂರು ರಘುನಂದನ್ ಉಪಸ್ತಿತರಿದ್ದರು. ನಾಡಿನ ವಿವಿಧ ಮೂಲೆಗಳಿಂದ 20 ಜನ ಕವಿಗಳು ಆಗಮಿಸಿದ್ದರು. ಬೆಂಗಳೂರಿನ ಕವಿಗಳು ಮಾತ್ರವಿರದೆ ಉತ್ತರ ಕರ್ನಾಟಕ, ಹಾಸನ , ಮೈಸೂರು, ಇನ್ನೂ ಹಲವೆಡೆಗಳಿಂದ ಕವಿಗಳು ಭಾಗವಿಸಿದ್ದರಿಂದ ಈ ಕವಿಗೋಷ್ಠಿ ವಿಶಿಷ್ಟವಾಗಿತ್ತು.
ಭಾಗವಹಿಸಿದ್ದ ಎಲ್ಲ ಇಪ್ಪತ್ತು ಮಂದಿ ಕವಿಗಳಿಗೆ  ಹಣತೆಯ ದೀಪವನ್ನು ಹತ್ತಿಸಿಕೊಡುತ್ತ ವಿಶಿಷ್ಟವಾಗಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಎಲ್ ಹನುಮಂತಯ್ಯನವರು ಕವಿತೆ ಹುಟ್ಟಿಕೊಳ್ಳುವ ಬಗೆಯನ್ನು ಅನೇಕ ಉದಾಹರಣೆಗಳನ್ನು ಕೊಡುತ್ತ ಕಾಜಾಣದ ಕಾರ್ಯವನ್ನು ಕುರಿತು ಅಭಿನಂದಿಸಿದರು. ಕವಿಗೆ ಗುಂಪು ಅನ್ನುವುದಿಲ್ಲ ಅವನು ತನ್ನ ಮನೋಶಕ್ತಿಯಿಂದ ಸಮಷ್ಟಿಯನ್ನು ವಿಶ್ವ ತತ್ವವನ್ನು ಕಟ್ಟಿ ಕೊಡುವ ಅಶಾಂತ ಸಂತ ಎಂದರು. ವಾರದ ಕೊನೆಯ ದಿನಗಳಲ್ಲಿ ಯುವಕರು ನಗರದ ಆಚೆ ಹೋಗಿ ರೇವು ಪಾರ್ಟಿಗಳನ್ನು ಮಾಡುತ್ತಿರುವ ಈ ದಿನಗಳಲ್ಲಿ ಭಾಗವಹಿಸಿದ ಕವಿಗಳೆಲ್ಲಾ ಕಾವ್ಯದ ಹುಚ್ಚು ಹತ್ತಿಸಿಕೊಂಡಿರುವುದು ಬಹು ಮುಖ್ಯವಾದ ಅಂಶ. ಇದಕ್ಕೆ ಕಾರಣವಾದ ಕಾಜಾಣ ನಾಡಿಗೆ ಬಹು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಎಚ್. ಎಲ್. ಪುಷ್ಪ ಅವರು ಮಾತನಾಡುತ್ತಾ ಕವಿಗೋಷ್ಠಿಯಲ್ಲಿ ಓದಿದ ಎಲ್ಲ ಕವಿತೆಗಳು ವರ್ತಮಾನಕ್ಕೆ ಗಂಭೀರವಾಗಿ ಸ್ಪಂದಿಸುತ್ತಿದೆ.ಲಂಕೇಶ್ ಬೋದಿಲೇರ್ ನೀಷೆ ಕಮೂ ಕುವೆಂಪು ಬೇಂದ್ರೆ ಅಡಿಗ ಇನ್ನೂ ಅನೆಕರನ್ನೂ ಉದಾಹರಿಸುತ್ತಾ  ಕಾವ್ಯ ವಸ್ತು , ಭಾಷೆ ಮತ್ತು ಅದರ ಸಂರಚನೆಯನ್ನು ಕುರಿತು ವಿಶೇಷವಾಗಿ ಮಾತನಾಡಿದರು. ಬಾಷೆಯನ್ನು ಪ್ರಮುಖವಾಗಿ ಗಮನಿಸುತ್ತಾ ಯಾವುದೇ ವಸ್ತು ಮತ್ತು ಭಾಷೆಯನ್ನೂ ನಮ್ಮ ದಾರಿಗೆ ಒಗ್ಗಿಸಿಕೊಂಡು ಕವಿತೆ ಕಟ್ಟಬೇಕು ಅಂದರು.

ಕವಿಗೋಷ್ಠಿಯಲ್ಲಿ ಓದಿದ ಪ್ರತಿಯೊಂದು ಕವಿತೆಯನ್ನು ಕುರಿತು ವಿಶ್ಲೇಷಿಸಿ ಕವಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಜೊತೆಗೆ ನಾನು ಇತ್ತೀಚಿಗೆ ಕಂಡು ಬಹು ವಿಶಿಷ್ಟವಾದ ಕವಿಗೋಷ್ಠಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.ವಸ್ತುವಿನಲ್ಲಿ ಶ್ರೇಷ್ಠ ಕನಿಷ್ಠ ಅನ್ನುವುದಿಲ್ಲ ಆಯ್ದುಕೊಂಡ ವಸ್ತುವನ್ನು ಅರ್ಥಪೂರ್ಣವಾಗಿ ಬಳಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾಜಾಣದ ಈ ಕೆಲಸಕ್ಕೆ ಪ್ರೀತಿಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಪ್ರಾಸ್ತವಿಕದಲ್ಲಿ ಬೇಲೂರು ರಘುನಂದನ್ ಕಾಜಾಣ ಕಾರ್ಯ ನಿರ್ವಹಿಸುತ್ತಿರುವ ಬಗೆ ಮತ್ತು ಕಾವ್ಯ ಕಾಜನದ ಆಶಯಗಳನ್ನು ತಿಳಿಸಿದರು. ಜೊತೆಗೆ ಕವಿಗಳಾದ ಸಂದ್ಯಾರಾಣಿ, ಜಯಲಕ್ಷ್ಮಿ ಪಾಟೀಲ್, ಚೀಮನ ಹಳ್ಳಿ ರಮೇಶ್ ಬಾಬು, ವಿ.ಆರ್ ಕಾರ್ಪೆಂಟರ್, ಪದ್ಮ .ಟಿ. ಚಿನ್ಮಯಿ, ಆರ್. ಜಿ . ಹಳ್ಳಿ ಅವರುಗಳು ಉಪಸ್ಥಿತರಿದ್ದು ಕವಿಗಳಿಗೆ ಕವಿತೆಯನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿ ಕಾಜಾಣದ ಕಾರ್ಯಕ್ಕೆ ಅಭಿನಂದಿಸಿದರು. ಕಲಾವಿದೆ ರೂಪಶ್ರೀ ಕಲ್ಲಿಗನೂರು ಪ್ರಾರ್ಥಿಸಿದರು. ಮಧುಶ್ರೀ ವೇಲೂರ್ ನಿರೂಪಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.



http://epaper.samyukthakarnataka.com/279309/Samyuktha-Karnataka/May282014Bangalore#page/3/2

Monday, February 10, 2014

“ಕಮ್ಮಟದಲ್ಲಿ ನಿಜಕ್ಕೂ ಆದದ್ದೇನು.. - ಶರತ್ ಚಕ್ರವರ್ತಿ

“ಕಮ್ಮಟದಲ್ಲಿ ನಿಜಕ್ಕೂ ಆದದ್ದೇನು.



ಇದೊಂದು ಬಹುಮುಖ್ಯವಾದ ಪ್ರಶ್ನೆ. ಕಮ್ಮಟದ ಮೊದಲ ದಿನ ಕವಿಗೋಷ್ಠಿಯೊಂದಿಗೆ ಆರಂಭವಾಯಿತು. ಮೊದಲೇ ಹೆಸರು ನೊಂದಾಯಿಸಿಕೊಂಡಿದ್ದ ಶಿಬಿರಾರ್ಥಿಗಳು ಅಲ್ಲಿ ಕವನ ವಾಚನ ಮಾಡಿದರು. ಈ ಕವಿಗೋಷ್ಠಿಯು ಸದ್ಯದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವುದು ಹೆಗ್ಗಳಿಕೆ ಎಂದುಕೊಳ್ಳುತ್ತೇನೆ. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಮುಕುಂದರಾಜ್, ಶಿವಾರೆಡ್ಡಿ ಶಿಬಿರಾರ್ಥಿಗಳನ್ನ ಕುರಿತು ಮಾತಾಡುತ್ತಾ ಕನ್ನಡ ಕಾವ್ಯಸಂದರ್ಭದಲ್ಲಿ ಪಂಪನ ಕಾಲದಿಂದ ಅಡಿಗರವರೆಗಿನ ಸಾಹಿತ್ಯ ಅರಿವಿನ ಪರಿಚಯವಿತ್ತರು. ಸಂಜೆಯಾಗುತ್ತಿದ್ದಂತೆ ಕವಿಗಳಾದ ಚೇತನ ತೀರ್ಥಹಳ್ಳಿ, ವಿ.ಆರ್ ಕಾರ್ಪೆಂಟರ್, ಚಕ್ರವರ್ತಿ ಚಂದ್ರಚೂಡ, ರಂಗಕರ್ಮಿ ಯೋಗೇಶ್ ಮಾಸ್ಟರ್ ಕಾವ್ಯದೊಂದಿಗಿನ ಅವರ ಒಡನಾಟಗಳ ಬಗ್ಗೆ ಮಾತನಾಡಿದರು.

ಎರಡನೇ ದಿನ ನಟರಾಜ್ ಹುಳಿಯಾರ್ ಕಾವ್ಯ ಓದುವ ದಾರಿಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ನಂತರ ಅತಿಥಿಗಳಾದ ಟಿ.ಎಲ್ಲಪ್ಪ, ಗಂಗಾಧರಯ್ಯ ಮಾಕಳ್ಳಿ, ಅಕ್ಷತ ಹುಂಚದಕಟ್ಟೆ ಕಾವ್ಯ ಪರಿಕರ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಮೂರನೇ ದಿನ ರಾಮಲಿಂಗಪ್ಪ ಬೇಗೂರು ಹಾಗೂ ಪ್ರತಿಭಾ ನಂದಕುಮಾರ್ ಶಿಬಿರಾರ್ಥಿಗಳಿಗೆ ಮುಖಾಮುಖಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಕಾಜಾಣ ಪುರಸ್ಕಾರವನ್ನ ಕವಿ ಗೊರವರ ಅವರಿಗೆ ನೀಡಿ ಸನ್ಮಾನಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು.
ಗೊಂದಲ ಹುಟ್ಟಿಕೊಂಡಿದ್ದು ಎಲ್ಲಿ..?

ನಾನು ಹೇಳಲೇ ಬೇಕಾದ ವಿಷಯವಿದು. ಕವಯತ್ರಿ ಪ್ರತಿಭಾ ನಂದಕುಮಾರ್ ಕಾವ್ಯದ ಬಗ್ಗೆ ಒಂದಷ್ಟು ಮಾತನಾಡಿ ಅವರೇ ಬರೆದ ಅದ್ಬುತ ಕವಿತೆಗಳನ್ನ ವಾಚಿಸಿದರು. ಅಕ್ಷರಶಃ ಎಲ್ಲಾ ಶಿಬಿರಾರ್ಥಿಗಳನ್ನ ಸೆಳೆಯುವಂತಿದ್ದವು ಅವರ ಮಾತು ಹಾಗೂ ಕವಿತೆಗಳು. ಹಿಂದೆ ಮಾತಾಡಿದ ಹಲವು ಕವಿಗಳು ತಮ್ಮ ಮಾತುಗಳಲ್ಲಿ ಉದಾಹರಣೆಯಾಗಿ ಪಂಪ, ರನ್ನ, ಕುಮಾರವ್ಯಾಸರನ್ನ ಪದೇ ಪದೇ ಹೆಸರಿಸಿ ಬೋರ್ ಹೊಡೆಸಿದ್ದಂತು ನಿಜ. ಆದರೆ ಪ್ರತಿಭಾ ನಂದಕುಮಾರ್ ಮಾತುಗಳಲ್ಲಿ ಆಧುನಿಕ ಸಮಸ್ಯೆಗಳಿಗೆ ಕಾವ್ಯ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಅವರ ಮಾತುಗಳು ಮುಗಿದ ನಂತರ ಸಂವಾದಕ್ಕೆ ಅವಕಾಶ ಒದಗಿಸಲಾಗಿತ್ತು. ಒಂದಿಬ್ಬರು ಪ್ರಶ್ನೆಗಳನ್ನು ಎತ್ತಿದರು. ಎಲ್ಲರ ಪ್ರಶ್ನೆಗಳು ಮುಗಿದ ಮೇಲೆ ಸ್ವತಃ ನಾನೇ ವೇದಿಕೆಗೆ ಹೋಗಿ ಮೂರು ದಿನಗಳಿಂದ ಹುಟ್ಟಿಕೊಂಡ ಹಲವು ಅನುಮಾನಗಳನ್ನ ಪ್ರಶ್ನಿಸ ಹೊರಟೆ. ಆ ಅನುಮಾನಗಳೆಂದರೆ

೧)ಪಂಪ, ರನ್ನರನ್ನೇ ಬೋರ್ ಹೊಡೆಯುವಷ್ಟು ಬಾರಿ ಹೆಸರಿಸಿದ ಕವಿಗಳು ಅಡಿಗರಿಂದೀಚೆಗಿನ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಮಾತಾನಾಡದಿದ್ದುದಕ್ಕೆ ಕಾರಣವೇನು?

೨)ಬಂಡಾಯ ಕಾವ್ಯ ನೆಲೆ ಕಳೆದುಕೊಂಡಿತು ಎಂಬುದು ನಿಜವ? ಹಾಗೇ ಬಂಡಾಯ ಸಾಹಿತ್ಯ ಅಪ್ರಸ್ತುತ ಎನ್ನುವುದಾದರೇ ಅದು ಹುಟ್ಟಿಹಾಕಿದ ಕ್ರಾಂತಿಗಳ ಕೊಡುಗೆ ಏನು ಇಲ್ಲವ? ನವೋದಯಗಳು ಭಾವಗೀತೆಗಳಾದರೆ ಬಂಡಾಯ ಕ್ರಾಂತಿಗೀತೆಗಳನ್ನು ಕೊಟ್ಟಿದ್ದು ನಿಜವಲ್ಲವ? (ಅತಿಥಿಯೊಬ್ಬರು ಬಂಡಾಯ ಸಾಹಿತ್ಯ ನೆಲೆ ಕಳೆದುಕೊಂಡು ಮೂಲೆ ಸೇರಿತು, ಇಂದಿಗೂ ನಾವು ನವೋದಯದ ಪದ್ಯಗಳನ್ನು ಹಾಡುತ್ತೇವೆ, ಎಂದಾಗ ಹುಟ್ಟಿಕೊಂಡ ಅನುಮಾನ)

೩) ಪಂಪನ ಕಾಲದಿಂದ ಇಲ್ಲಿಯವರೆಗೂ ಎಲ್ಲಾ ಕವಿಗಳು ಸಮಾಜದ ಹುಳುಕುಗಳನ್ನೇ ಟೀಕಿಸುತ್ತಾ ಬಂದಿದ್ದಾರೆ, ಆದರೆ ಅದು ಸಮಾಜದ ಮೇಲೆ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶವಾಗಿಲ್ಲ, ಎಂದು ಮುಕುಂದರಾಜರು ಅವರ ಭಾಷಣದಲ್ಲಿ ಹೇಳಿದರು. ಹಾಗಾದರೇ ಜನರಿಗೆ ಮುಟ್ಟುವಂತಹ ಸಾಹಿತ್ಯಕ್ಕಾಗಿ ಇಂದಿನ ಕವಿ ಪ್ರಯತ್ನಿಸಬೇಕಾಗುತ್ತದೆಯೆ?

ಇದಿಷ್ಟು ಪ್ರಶ್ನೆಗಳಿಟ್ಟುಕೊಂಡು ನಾನು ವೇದಿಕೆಯೇರಿದ್ದೆ. ನನ್ನ ಮೊದಲ ಪ್ರಶ್ನೆ ಶುರು ಮಾಡೋ ಮುಂಚೆಯೇ ಮುಕುಂದರಾಜರಿಗೆ ನನ್ನ ಪ್ರಶ್ನೆ ಚುಚ್ಚಿದಂತಾಯಿತು. ಏಕೆಂದರೆ ಧಾರಾವಾಡ ಸಮ್ಮೇಳನದಲ್ಲಿ ಹಳೆಗನ್ನಡ ಓದಬೇಕೆ ಬೇಡವೇ ಎಂಬೊಂದು ಚರ್ಚೆ ನಡೆದಿತ್ತು. ಇಲ್ಲಿಯೂ ಕೂಡ ಅಂತಹದ್ದೇ ಪ್ರಶ್ನೆ ಬಂದಿತ್ತಲ್ಲ ಎಂದು ತಪ್ಪಾಗಿ ತಿಳಿದು ಸಿಟ್ಟಾದರು. ಇಂತಹ ಪ್ರಶ್ನೆಯೊಂದೇ ಮೂರ್ಖತನದ್ದು ಎಂಬಂತೆ ಉತ್ತರಿಸಿದರು. ಆದರೆ ಉತ್ತರ ಏತ್ತರಿಸಿದ ಧ್ವನಿಯಲ್ಲಿತ್ತು, ವಾಗ್ಯುದ್ದ ನಡೆದಂತಯೇ. ಮಧ್ಯದಲ್ಲಿ ಮತ್ತಷ್ಟು ಶಿಬಿರಾರ್ಥಿಗಳ ಪರ ವಿರೋಧಗಳಂತೆ ಮಾತನಾಡಿ ಚರ್ಚೆ ವಿಷಯಾಂತರದತ್ತ ಸಾಗಿತ್ತು. ನಂತರ ಮತ್ತೊಮ್ಮೆ ಅವಕಾಶ ಕೇಳಿಕೊಂಡು ನನ್ನ ಸಮಸ್ಯೆಯನ್ನ ಅವರಿಗೆ ಮನವರಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದುದ್ದರಿಂದ ವೇದಿಕೆ ಬಿಟ್ಟು ಇಳಿಯಬೇಕಾಯಿತು. ನಂತರ ಮುಕುಂದರಾಜ್ ಸರ್ ಬಳಿ ನನ್ನ ಪ್ರಶ್ನೆಯನ್ನ ಅರ್ಥ ಮಾಡಿಸಿದೆ. ಕಮ್ಮಟದ ನಂತರ ಸಿಕ್ಕಿ ಒಂದಷ್ಟು ಚರ್ಚೆ ಮಾಡುವ ಭರವಸೆಯನ್ನಂತು ಕೊಟ್ಟರು. ಅಲ್ಲಿಗೆ ಸಮಾರೋಪದ ಸಮಯವಾಗಿ ಕಾರ್ಯಕ್ರಮದ ಅಂತ್ಯದ ಕಡೆ ಮುಖ ಮಾಡಿದೆವು.
ಆದರೆ ಫೇಸ್ಬುಕ್ನಲ್ಲಿ ನಡೆಯುತ್ತಿರುವ ವಾದಗಳೇನು?

ಅದೆಲ್ಲಾ ಸಾಹಿತ್ಯ ಸಂವಾದವೆಂದೇ ಕರೆಯಲಿಚ್ಚಿಸುತ್ತೇನೆ. ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದಲ್ಲಿ ಅತಿಥಿಗಳ ಮಾತುಗಳನ್ನ, ತಮ್ಮಲ್ಲಿನ ಪ್ರಶ್ನೆ ಹಾಗೂ ಸಮಜಾಯಿಷಿಗಳನ್ನ ಎಲ್ಲರೂ ಕಾವ್ಯರೂಪದಲ್ಲೇ ವ್ಯಕ್ತಪಡಿಸುತ್ತಾ ವಾಗ್ವಾದಕ್ಕಿಳಿದರು. ಇದನ್ನ ಹಲವರು ಜಗಳವೆಂದೇ ತಿಳಿದರು. ಜಗಳವಲ್ಲದ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಿವೆ. ಈ ತರಹದ ವಾಗ್ವಾದಗಳು ಕುವೆಂಪು ಮಾಸ್ತಿ ಕಾಲದಿಂದಲೂ ನಡೆಯುತ್ತಲೇ ಬಂದಿವೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ವಾದ-ವಿವಾದಗಳೆರಡು ಕಾವ್ಯದ ಮುಖಾಂತರವೇ ನಡೆಯುತ್ತಿರುವುದರಿಂದ ಕಮ್ಮಟದ ಪ್ರಭಾವದಿಂದ ಮತ್ತಷ್ಟು ಮೊನಚಾಗಿ ಬರೆಯುವಲ್ಲಿ ಶಿಬಿರಾರ್ಥಿಗಳು ತಮಗೆ ಗೊತ್ತಿಲ್ಲದೇ ತೊಡಗಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕಾವ್ಯದ ಮುಖಾಂತರವೇ ಟೀಕಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಸಂತೋಷದ ವಿಷಯವಲ್ಲದೇ ಮತ್ತೇನು.
ಕೊನೆಯದಾಗಿ…

ಕಾಜಾಣ ರೆಕ್ಕೆ ಮುರಿದುಕೊಂಡಿತು ಎಂದು ಒಂದಷ್ಟು ಮನಸ್ಸುಗಳು ಸಂತಸ ಪಟ್ಟವಂತೆ. ಅವರ ಮನಸ್ಥಿತಿಯ ಬಗ್ಗೆ ಕನಿಕರವಿದೆ. ಆದರೆ ಕಾಜಾಣ ಬಳಗ ಕಾವ್ಯ ಕಮ್ಮಟದಲ್ಲಿ ಹಾಜರಿದ್ದ ಶಿಬಿರಾರ್ಥಿಗಳ ಒಂದೊಂದು ಕವಿತೆಗಳನ್ನ ಸಂಗ್ರಹಿಸಿ “ಕಾವ್ಯ ಕಾಜಾಣ” ಎಂಬ ಹೊತ್ತಿಗೆಯನ್ನ ತರುವ ನಿರ್ಧಾರದಲ್ಲಿದೆ. ಅಲ್ಲದೇ ಕಮ್ಮಟ ಯಶಸ್ವಿ ನಡೆದ ಖುಷಿಗೆ ಗೆಟ್ ಟುಗೆದರ್ ತರಹದ ಸಣ್ಣದೊಂದು ಬೇಟಿಯನ್ನ ಆಯೋಜಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಅಲ್ಲಿ ನಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ರೂಪರೇಷೆಯನ್ನು ತಯಾರಿಸಲಾಗುವುದು. ಮತ್ತಷ್ಟು ಕಲೆ, ಸಾಹಿತ್ಯದ ಕಾರ್ಯಕ್ರಮಗಳನ್ನ ಆಯೋಜಿಸುವುದರ ಮೂಲಕ ಕಾಜಾಣ ನಿಮ್ಮ ಜೊತೆಗಿರುತ್ತದೆ.


- ಶರತ್ ಚಕ್ರವರ್ತಿ 

Tuesday, January 7, 2014

ಯುವ ಕಾವ್ಯ ಪುರಸ್ಕಾರ

ಕಾಜಾಣವು ಹಲವು ಹೊಸ ಪ್ರತಿಭೆಗಳಿಗೆ ಆವರಣ ಮತ್ತು ಅನಾವರಣ ಆಗುತ್ತಾ ಪುಟ್ಟ ಹೆಜ್ಜೆಗಳಿಂದ ದಿಟ್ಟ ಹೆಜ್ಜೆಗಳೆಡೆಗೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ನಾಡಿನ ಆರೋಗ್ಯಪೂರ್ಣ,ಸೃಜನಶೀಲ ಮತ್ತು ಚಿಂತನಾಶೀಲ ಮನಸ್ಸುಗಳು ನಮ್ಮ ಜೊತೆಯಾಗುತ್ತಲೇ ಬರುತ್ತಿರುವುದು ನಮ್ಮ ಕಾಜಾಣಕ್ಕೆ ಜೀವಂತಿಕೆಯ ಶಕ್ತಿಯನ್ನು ಕೊಟ್ಟಿದೆ.ಅದರೊಟ್ಟಿಗೆ ಬಳಗದೊಳಗಿನ ಕಾಜಾಣಗಳ ಆಸಕ್ತಿ ಪ್ರತಿಭೆ ಮತ್ತು ಶ್ರಮಕಟ್ಟುವ ಕ್ರಿಯೆಗೆ ಸ್ಪಷ್ಟತೆ ಕೊಡುತ್ತಿದೆ.

ಉಮಾಶ್ರೀ ಸಿನಿಮೋತ್ಸವ ಸಾಕಾರಗೊಂಡು ಈಗ ಕಾವ್ಯಕಮ್ಮಟ2014 ಇದರ ಜೊತೆಗೆ ಈ ಬಾರಿಯಿಂದ "ಯುವ ಕಾವ್ಯ ಪುರಸ್ಕಾರ" ಕೊಡಮಾಡುತ್ತಿದೆ.


Thursday, November 14, 2013

ಉಮಾಶ್ರೀ ಚಿತ್ರೋತ್ಸವ : ನಟಿಯ ಆಂತರ್ಯ ಬದುಕಿನ ಯಾನ - ಶಂಕರ್ ಮಿತ್ರಾ ಶ್ರೀವಾಸ್ತವ್

ಬೆಂಗಳೂರಿನ ಉತ್ಸಾಹಿ ತಂಡ "ಕಾಜಾಣ " ಆಯೋಜಿಸಿದ್ದ ಉಮಾಶ್ರೀ ಚಿತ್ರೋತ್ಸವ ಇತ್ತೀಚೆಗಷ್ಟೇ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆಯಿತು .  ಬೇಲೂರು ರಘುನಂದನ್ ರವರ ನೇತೃತ್ವ ದಲ್ಲಿ ನಡೆದ ಮೂರು ದಿನದ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು . ಚಿತ್ರರಂಗದ ಗಣ್ಯರಾದ ಕೇಸರಿ ಹರವು , ರೇಖಾ ರಾಣಿ , ಆ ದಿನಗಳು ಚಿತ್ರ ನಿರ್ದೇಶಕ ಚೈತನ್ಯ , ಆದ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ , ಡಾ।। ನಿಕಿಲಾ  , ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ನಟಿ  ಉಮಾಶ್ರೀ ಯವರ ಚಿತ್ರ ಬದುಕಿನ ಬಗೆಗಿನ ಹೊರ ಒಳವುಗಳನ್ನ ಶಿಬಿರಾರ್ಥಿಗಳೊಡನೆ ಹಂಚಿಕೊಂಡರು  ಹಾಗೂ ಚರ್ಚೆ ನಡೆಸಿದರು . ಮೂರು ದಿನದ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರ ಕೊಟ್ರೇಶಿ ಕನಸು , ಕನಸೆಂಬ ಕುದುರೆಯನೇರಿ , ಗುಲಾಬಿ ಟಾಕೀಸ್ ಚಿತ್ರಗಳ ಪ್ರದರ್ಶನವನ್ನೂ ಕೂಡ ಕಾಜಾಣ ಆಯೋಜಿಸಿತ್ತು . ಒಬ್ಬ ನಟಿಯನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿರುವ ಈ ಚಿತ್ರೋತ್ಸವ ದೇಶದ ಮೊಟ್ಟ ಮೊದಲ ಪ್ರಯತ್ನ .  ಕಾಜಾಣದ ಮೊದಲ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ .

 ಮೊದಲ ದಿನ ಕೇಸರಿ ಹರವು ರವರು ಉಮಾಶ್ರಿ ಯವರ ಆರಂಭದ ದಿನಗಳು ಬಗ್ಗೆ ಮಾತನಾಡುತ್ತಾ ಉಮಾಶ್ರೀ ಯವರ ರಂಗ ಭೂಮಿಯ ಬದುಕಿನ ವಿವಿದ ಆಯಾಮಗಳನ್ನು ಶಿಬಿರಾರ್ಥಿ ಗಳ ಮುಂದೆ ತೆರೆದಿಟ್ಟರು . ಆಕಸ್ಮಿಕತೆ ಗಿಂತ ಅನಿವಾರ್ಯತೆ ಉಮಾಶ್ರೀ ಯವರನ್ನು ರಂಗಭೂಮಿ ಯಿಂದ ಚಿತ್ರರಂಗಕ್ಕೆ ಕರೆದೊಯ್ಯಿತು ಎಂದು ತಿಳಿಸಿದರು . ಲೇಖಕಿ ನಿರ್ದೇಶಕಿ ನಿರ್ಮಾಪಕಿ ರೇಖಾ ರಾಣಿಯವರು ಉಮಾಶ್ರೀ ಯವರ ದ್ವಂದ್ವಾರ್ಥ ಚಿತ್ರಗಳ ಬಗ್ಗೆ ಮಾತನಾಡುತ್ತಾ ಉಮಾಶ್ರೀ ಹಾಗೂ ಎನ್ .ಎಸ್ . ರಾವ್ ರವರ ಕಾಂಬಿನೇಶನ್ ಚಿತ್ರಗಳು ಆ ಕಾಲದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದವು . ಸೂಕ್ಷ್ಮ ವಾಗಿ ಗಮನಿಸಿದಾಗ ಉಮಾಶ್ರೀ ಯವರ ಮಾತಿನಲ್ಲಿ - ಆಂಗಿಕ ಭಾವದಲ್ಲಿ ಪಾತ್ರ ತಾವಾಗುತ್ತಿದ್ದರು . ಆದರೆ ಮುಗ್ದತೆ ಮಾತ್ರ ಮುಖದಲ್ಲಿ ಸದಾ ಇರುತ್ತಿತ್ತು. ಎಲ್ಲ ಚಿತ್ರಗಳೂ ಎಲ್ಲ ಕಾಲದಲ್ಲೂ ಪ್ರೇಕ್ಷಕರನ್ನು ಮರಳು ಮಾಡಲು ಸಾದ್ಯವಿಲ್ಲ.  ದ್ವಂದ್ವಾರ್ಥ ಕೂಡ ಒಂದು ಕಲೆಯಾ ಪ್ರಾಕಾರವೇ ಎಂದು ಮಂಡಿಸಿದರು . ಕೆ ಎಂ ಚೈತನ್ಯ ರವರು ಉಮಾಶ್ರೀ ಯವರೊಡನೆ ತಮ್ಮ ಚಿತ್ರ ರಂಗದ ಅನುಭವವನ್ನೂ - ಕೊಟ್ರೇಶಿ ಕನಸು ಚಿತ್ರದ ಬಗ್ಗೆ ಚರ್ಚೆಯಲ್ಲಿ ಶಿಭಿರಾರ್ಥಿ ಗಳೊಡನೆ ಭಾಗವಹಿಸಿದರು.

ಎರಡನೇ ದಿನ ಕನಸೆಂಬ ಕುದುರೆಯನೇರಿ ಚಿತ್ರ ಪ್ರದರ್ಶನ ದ ನಂತರ ಕನಸೆಂಬ ಕುದುರೆಯನೇರಿ ಚಿತ್ರದ ಕಾದಂಬರಿಗಾರ ಅಮರೇಶ್ ನುಗಡೋಣಿ ಯವರೊಡನೆ ಚಿತ್ರದ ಬಗ್ಗೆ ಸಂವಾದ ವಿತ್ತು . ಶಿಬಿರಾರ್ಥಿಗಳೊಡನೆ ಮಾತನಾಡುತ್ತಾ ಅಮರೇಶ್ ರವರು ದೃಶ್ಯ ಮಾದ್ಯಮಕ್ಕೂ ಬರಹಕ್ಕೂ ಇರುವ ವ್ಯತ್ಯಾಸ ಮತ್ತು ಗಿರೀಶ್ ಕಾಸರವಳ್ಳಿ ಯವರು ಕೇವಲ ತಮ್ಮ ಸವಾರಿ ಕಾದಂಬರಿಯ ತಿರುಳನ್ನು ಮಾತ್ರ ಇಟ್ಟುಕೊಂಡು ಚಿತ್ರವನ್ನು ಪ್ರಸ್ತುತ ದಿನಗಳಿಗೆ ತೆರಿದಿಟ್ಟ ತಂತ್ರಗಳ ಬಗ್ಗೆ ಮಾತನಾಡಿದರು . ನಂಬಿಕೆಯ ಬದುಕಿನಲಿ ವಿಹರಿಸುವುದು ತಮ್ಮ ಕತೆಯಲ್ಲಿದೆ .. ಆದರೆ
ಅದನ್ನು ಮೀರಿ ಬದುಕಲು ಸಾದ್ಯ ಎಂಬುದನ್ನು ಗಿರೀಶ್ ಕಾಸರವಳ್ಳಿ ಯವರು ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಅವರನ್ನು ಶಾಘ್ನಿಸಿದರು . ಉಮಾಶ್ರಿ ಯವರ ಬದುಕು ಆಂತರ್ಯ ರೂಪಾಂತರ ಗಳ ಬಗ್ಗೆ ಮಾತನಾಡಿದ ಅಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಯವರು ಉಮಾಶ್ರೀ ಯವರು ಆಂತರ್ಯದ ಮೂಲಕ ಪ್ರಕಟ ಗೊಳ್ಳುವ ಅವರ ಮನಸ್ಥಿತಿ ಬಗ್ಗೆ , ಅವರ ಪಾತ್ರಗಳ ಪರಕಾಯ ಪ್ರವೇಶ , ಉಮಾಶ್ರೀ ಯವರು ತಮಗರಿವಿಲ್ಲದಂತೆ ಪಾತ್ರಗಳ ಪರಕಾಯ ಪ್ರವೇಶ - ನಂತರ ಪಾತ್ರಗಳಿಂದ ಕಳಚಿಕೊಂಡು ಬರಿದಾಗುತ್ತಿದ್ದರು . ಮತ್ತೆ ಹೊಸ ಪಾತ್ರಗಳನ್ನ ತುಂಬಿಕೊಳ್ಳುತ್ತಿದ್ದರು . ಮತ್ತೆ ಬರಿದಾಗುತ್ತಿದ್ದರು . ಈ ತುಂಬಿ ಕೊಳ್ಳುವಿಕೆ . ಬರಿದಾಗುವಿಕೆಯೇ ಅವರನ್ನು ಉತ್ತುಂಗಕ್ಕೆ ಕರೆದೊಯ್ದಿದೆ . ಜೊತೆಗೆ ದುಃಖ ಪರಂಪರೆಯ ನಡೆ ಉಮಾಶ್ರೀ ಯವರಲ್ಲಿತ್ತು ದುಃಖ ದಲ್ಲಿ ಕಲಿತಷ್ಟು ಮನುಷ್ಯ ಸುಖದಲ್ಲಿ ಕಲಿಯುವುದಿಲ್ಲ ಎಂದು ಆಧ್ಯಾತ್ಮಕ ವಾಗಿ ಉಮಾಶ್ರೀಯವರ ಬೆಳವಣಿಗೆ ಬಗ್ಗೆ ತೆರೆದಿಟ್ಟರು . ಡಾ ।। ನಿಕಿಲಾ  ಪೋಷಕ ಪಾತ್ರಗಳಲ್ಲಿ ಉಮಾಶ್ರೀಯ ಬೆಳವಣಿಗೆ ಬಗ್ಗೆ ತಿಳಿಸಿದರು .

 ಮೂರನೇ ದಿನ ಗಿರೀಶ್ ಕಾಸರವಳ್ಳಿ ಯವರ ಗುಲಾಬಿ ಟಾಕೀಸ್ ಚಿತ್ರ ಪ್ರದರ್ಶನ ದ ನಂತರ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರೊಡನೆ ಶಿಭಿರಾರ್ಥಿ ಗಳ ನೇರ ಸಂವಾದವಿತ್ತು . ಉಮಾಶ್ರೀ ಪ್ರಭುದ್ದ ನಟಿಯಷ್ಟೇ ಅಲ್ಲ ಒಳ್ಳೆ ಸೃಜನ ಶೀಲತೆ ಯುಳ್ಳ ನಟಿ ಹಾಗೂ ಅವರ ಪಾತ್ರಗಳ ಸೂಕ್ಮತೆ ಗಳನ್ನೂ ತಿಳಿಸಿದರು . ನಂತರ ಉಮಾಶ್ರೀ ಯವರೊಡನೆ ಶಿಭಿರಾರ್ಥಿಗಳ ನೇರ ಸಂವಾದ ವನ್ನು ಕಾಜಾಣ ತಂಡ  ಏರ್ಪಡಿಸಿತ್ತು . ಸಂವಾದದಲ್ಲಿ ಉಮಾಶ್ರೀ ಯವರು ತಾವು ಉಮಾದೇವಿ ಯಿಂದ ಉಮಾಶ್ರೀ ಯಾದ  ಬಗ್ಗೆ , ತಮ್ಮ ರಂಗ ಭೂಮಿ ಪಯಣ - ಸಿನಿ ಪಯಣವನ್ನು ಶಿಭಿರಾರ್ಥಿಗೊಡನೆ ಹಂಚಿಕೊಂಡರು . ಸಂವಾದದ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

 

ಸಮಾರೋಪ ಕಾರ್ಯಕ್ರಮದಲ್ಲಿ ಉಮಾಶ್ರೀ ಯವರೊಡನೆ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ , ನಿರ್ದೇಶಕ ಗಿರೀಶ್ ಕಾಸರವಳ್ಳಿ , ಚಿತ್ರ ಸಾಹಿತಿ ರೇಖಾ ರಾಣಿ , ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ,  ಉಮಾಶ್ರೀ ಯವರ ಪುತ್ರ ವಿಜಯ್ ಕುಮಾರ್ ಮತ್ತು ಕುಟುಂಬ ,ಹಾಗೂರವರು ಭಾಗವಹಿಸಿದ್ದರು .

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ  ಉಮಾಶ್ರೀ ಯವರು ಚಿತ್ರರಂಗದಲ್ಲಿ ಪ್ರಿಯವಾಗುವ ನಾವುಗಳು ರಾಜಕೀಯದಲ್ಲಿ ಎಲ್ಲರಿಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದು ಅಸಾದ್ಯ . ತನ್ನ ಬದುಕನ್ನ ಕಟ್ಟಿ ಕೊಡಲು ರಂಗಭೂಮಿ ಮತ್ತು ಚಿತ್ರ ರಂಗ ಸಹಾಯ ಮಾಡಿದೆ ಮತ್ತೊಂದೆಡೆ ರಾಜಕೀಯ ಬೇರೆಯವರಿಗೆ ಸಹಾಯ ಮಾಡುವ ಅವಕಾಶ ನೀಡಿದೆ . ಹಿಂದಿನ ರಾಜ್ಯೋತ್ಸವ ಪ್ರಶಸ್ತಿಗಳು ಸಾಕಷ್ಟು ಜನರ ಟೀಕೆಗೆ ಒಳಗಾಗಿದ್ದವು . ಆದರೆ ಈ ವರ್ಷದ ಪ್ರಶಸ್ತಿಗಳು ಕಡಿಮೆ ಟೀಕೆಗೆ ಒಳಗಾಗಿದ್ದಾವೆಂದು ಹೆಮ್ಮೆ ಯಿಂದ ನುಡಿದರು .

ಸಚಿವರಾದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಉಮಾಶ್ರೀ ಚಿತ್ರಗಳು ಸಾಹಿತ್ಯದ ಹೊರತಾಗಿ ಮನರಂಜನಾತ್ಮಕ ಮಾಧ್ಯಮ ಗಳಿಂದಲೂ ಪರಿವರ್ತನೆ ಸಾದ್ಯ ಎಂಬುದನ್ನು ನಿರೂಪಿಸಿದ್ದಾವೆಂದು
ತಿಳಿಸಿದರು .

ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರು ಸಿನಿಮಾ ಮಾಧ್ಯಮ ಕೇವಲ ಮನರಂಜನೆಗೆ ಸೀಮಿತ ವಾಗಿರದೇ ಸಮಾಜವನ್ನು , ಸಮಾಜದ ಒಳ ಹೊರವುಗಳನ್ನು ತೆರೆದಿಡುವ ಕನ್ನಡಿಯಾಗಬೇಕು ಎಂದರು .

ಚಿತ್ರಲೇಖಕಿ ರೇಖಾ ರಾಣಿಯವರು ಮಾತನಾಡಿ ಚಿತ್ರರಂಗಕ್ಕಿರುವ ಭೌದ್ದಿಕತೆ - ನೈತಿಕತೆ ಜೊತೆಗೆ ಸಮಸ್ಯೆ ಯನ್ನು ಅವಲೋಕಣ ಮಾಡಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವ ಬಗ್ಗೆ ಇಂತಹ ಶಿಬಿರಗಳು ನಿರಂತರವಾಗಿ ನಡೆಯ ಬೇಕು ಎಂದರು.

ಕುವೆಂಪು ಪ್ರತಿಷ್ಟಾನದ ಅದ್ಯಕ್ಷ ನಾಡೋಜ ಹಂಪ ನಾಗರಾಜಯ್ಯ ರವರು ಮಾತನಾಡುತ್ತ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಬೆಳವಣಿಗೆಗೆ ಯುವಕರ ಪಾತ್ರ ಅಮೂಲ್ಯವಾದುದ್ದು . ಇವರು ಪ್ರತ್ಯೇಕ ದ್ವೀಪಗಳಾಗಿರದೆ ನಾಡು - ನುಡಿ - ಕನ್ನಡ  ಬೆಳಸುವ ಬೆಳಗಿಸುವ ದೀಪವಾಗಿರಬೇಕು ಎಂದು ನೆರೆದ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿದರು ಹಾಗೂ ಶುಭ ಹಾರೈಸಿದರು .

 ಕಾಜಾಣ ಬಳಗದ ಬೇಲೂರು ರಘುನಂದನ್ ಶಿಬಿರದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸುತ್ತ ಇದು ಕೊನೆಯಲ್ಲ ... ನಿರಂತರ
ಶಂಕರ್ ಮಿತ್ರಾ ಶ್ರೀವಾಸ್ತವ್
                                                                                 








                                       
http://newskannada.com/karavaliinner.php?news=rs&nid=8243