ಬದುಕು ನಿಂತರೆ ಅದು ನಿಂತ ಗಡಿಯಾರದಂತೆ. ಅದೇ ಬದುಕು ಕ್ರಿಯಾಶೀಲವಾಗಿದ್ದರೆ ಸೃಜನಗೊಂಡು ಚಲನಶೀಲವಾಗುತ್ತೆ. ಬದುಕಿಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಅಂಟಿಕೊಂಡಿರುವ ಮಾಸಿದ ಮುಖ ಕಳಚಿದಾಗ ಚಲಿಸಿ ಸಂಚಲನ ಉಂಟುಮಾಡುತ್ತದೆ. ಸಮಾಜ, ಜೀವನ, ಮನುಷ್ಯವರ್ಗ ಇಂದಿನ ನಾಗಾಲೋಟದ ನಾಗರೀಕತೆಯಲ್ಲಿ ತನ್ನನ್ನು ತಾನು ಕಳೆದುಕೊಂಡು ನಿಜದ ಮೆಟ್ಟಿಲುಗಳನ್ನು ತಾನೇ ಕೆಡವಿಕೊಂಡು ನಿಂತುಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ನಿಜಗಳೇ ಇಲ್ಲವೆಂದು ಅಲ್ಲ. ಅದರ ಅನಾವರಣದಲ್ಲಿ ಅನೇಕ ತೊಡಕುಗಳಿವೆ. ಹಾಗೇ ನಿಂತ ಜಾಗವನ್ನು ನಾವು ನೋಡಿಕೊಂಡಾಗಲೇ ನಿಂತಿರುವ ಪರಿಧಿಯ ವ್ಯಾಪ್ತಿ ಮತ್ತು ಪರಿಮಿತಿ ಎರಡೂ ನಮ್ಮ ಅರಿವಿಗೆ ಬರುವುದು. ಹಾಗೆ ಅರಿವಿಗೆ ಬಂದಾಗ ಕೆಡವಿದ ಮೆಟ್ಟಿಲುಗಳ ಪಳೆಯುಳಿಕೆಗಳ ಸರಿಸಿ ಮತ್ತೆ ಏರಲು, ಇಳಿಯಲು ಬೇಕಾದ ಮಾಧ್ಯಮವನ್ನು ನಿರ್ಮಿಸುವ ದಾರಿಯನ್ನು ಗ್ರಹಿಸಲು ಸಾಧ್ಯವಾಗುವುದು ಆಗಲೇ.
ಇಂದು ನಮ್ಮ ಮುಂದೆ ಅವಕಾಶಗಳ ದೊಡ್ಡಸಾಗರವೇ ಇದೆ. ಆದರೆ ಅಗತ್ಯಗಳ ಗುರುತಿಸುವಿಕೆಯೇ ಈ ಹೊತ್ತಿನ ಬಹುಮುಖ್ಯ ಸಮಸ್ಯೆ. ನನಗೆ, ನಮಗೆ ಯಾವುದು ಬೇಕು, ಯಾವುದು ಬೇಡ ಎಂಬ ಮೂಲಭೂತ ಪ್ರಶ್ನೆಯನ್ನೇ ನಾವು ಎದುರು ಹಾಕಿಕೊಳ್ಳದೇ ಪಡೆಯುವ ಯಂತ್ರವಾಗಿ ಸಿಕ್ಕಿದೆಲ್ಲಾ ಸೀರುಂಡೆಯಾಗಿ ಸೀದುಬಿಟ್ಟರೆ ಕೊನೆಗೆ ಮೈಮನಸ್ಸುಗಳಿಗೆಲ್ಲಾ ಗ್ಯಾಂಗ್ರಿನ್ ಹಿಡಿಸಿಕೊಂಡಾದ ಮೇಲೆ ಪಥ್ಯದ ದಾರಿಗೆ ಹೋದರೆ 'ಪ್ರಯೋಜನ' ತನ್ನ ಅರ್ಥವನ್ನು ಕಳೆದುಕೊಂಡು ನಿಷ್ಕ್ರಿಯವಾಗಿಬಿಡುತ್ತದೆ. ಇದೇ ನಮ್ಮ ಯುವಜನಾಂಗದ ಮುಂದಿರುವ ಬಹುದೊಡ್ಡ ಸವಾಲು. ಅಂದ್ರೆ ನಾನು ನೇರ ಹೇಳಹೊರಟಿರುವ ವಿಷಯ ಮತ್ತು 'ಕಾಜಾಣ'ದ ಆಶಯಗಳೆರಡೂ ಒಂದೇ ಎಂದು ಸ್ಪಷ್ಟಪಡಿಸುತ್ತೇನೆ. ಗುಪ್ತಗಾಮಿನಿಯಾಗಿ ಜನಿಸಿದ ನದಿ ಹೇಗೆ ಸಾಗರ ಸೇರುವವರೆಗೂ ನಿರ್ವಹಿಸುವ ಬೇರೆ ಬೇರೆ ಅವಸ್ಥೆಗಳ ರೀತಿಯಲ್ಲಿಯೇ ಕಾಜಾಣವು ಕೂಡ ಕಾರ್ಯನಿರ್ವಹಿಸುತ್ತದೆ. ಅದರ ದಾರಿಯುದ್ದಕ್ಕೂ ತಣ್ಣಗೆ ಹರಿಯುವುದು, ಶಾಂತವಾಗಿ ಹರಿಯುವುದು, ಧುಮ್ಮಿಕ್ಕುವುದು, ಭೋರ್ಗರೆಯುವುದು, ಕೊನೆಗೆ ಸಾಗರ ಸೇರುವುದು. ಈ ನಡುವೆ ಅಗತ್ಯವಿರೊ ಎಷ್ಟೋ ಮಂದಿ ನೀರು ಕುಡಿವರು, ಬೆಳೆ ಬೆಳೆವರು, ಅನ್ನ ಉಣ್ಣುವರು, ಉಣ್ಣಿಸುವರು. ಅಷ್ಟೇ ಅಲ್ಲ ಹಸುರಿಗೂ ಹೆಸರು ಬರುವುದು, ಉಸಿರಿಗೂ ಆಪತ್ತು ತಪ್ಪುವುದು. ಮಣ್ಣು, ಹೊನ್ನು, ಅದಿರು, ಪೊದರು ಎಲ್ಲಾ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಸಂಪತ್ತನ್ನು ದುಪ್ಪಟ್ಟು ಮಾಡಿಕೊಳ್ಳುವವು. ನಮ್ಮ ಕಾಜಾಣವೂ ಹೀಗೆ ಗಟ್ಟಿಕಾಯಕಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.
ವ್ಯಷ್ಠಿ ಸಮಷ್ಠಿಯಾಗುವಲ್ಲಿ ವ್ಯಕ್ತಿ, ವ್ಯಕ್ತಿತ್ವಗಳು ಸಾಕಷ್ಟು ರೀತಿಯಲ್ಲಿ ಸಮಾಜದೊಂದಿಗೆ ಮುಖಾಮುಖಿಯಾಗುತ್ತದೆ. ಒಬ್ಬ ವ್ಯಕ್ತಿ, ವ್ಯಕ್ತಿತ್ವವಾಗಿ ಸಮಷ್ಠಿಯ ಜೊತೆಗೆ ಅನುಸಂಧಾನ ಮಾಡಿಕೊಳ್ಳಬೇಕಾದರೂ ಕೂಡಾ ಸಮಾಜದೊಂದಿಗೆ ಎದುರುಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ವ್ಯಕ್ತಿಯಾದವನು ಸ್ವಾರ್ಥಪರ ಚಿಂತನೆ ಮತ್ತು ವ್ಯಕ್ತಿಯಾಗಿ ಏಳ್ಗೆಯನ್ನು ಬಯಸುವುದನ್ನು ಬಿಟ್ಟು ಸಮಷ್ಠಿಯ ಅಭಿವೃದ್ದಿಗೆ ತನ್ನ ಆಶಯಗಳನ್ನು ಹೊಂದಿಸಿಕೊಂಡಿರುತ್ತಾನೆ. ಇದಕ್ಕೆ ಸಹಾಯ ಮಾಡುವ ಪರಿಕರಗಳೆಂದರೆ ಪ್ರತಿಭೆ, ಶ್ರಮ, ಶ್ರದ್ದೆ, ಬದ್ದತೆ, ಜೀವನಪ್ರೀತಿ, ವ್ಯವಧಾನ, ಇತ್ಯಾದಿ. ಇವೆಲ್ಲವನ್ನು ಒಳಗೊಂಡ ವ್ಯಕ್ತಿತ್ವ ಹಲವು ದಿಕ್ಕುಗಳಿಂದ ಸಮಷ್ಠಿಯೆಡೆಗೆ ಸದಾ ತುಡಿಯುತ್ತದೆ.
ಹತ್ತು ಹಲವಾರು ಜಾಗತಿಕ ಕಾರಣಗಳಿಂದ ಮನುಷ್ಯ ಇಂದು ಏಕಮುಖಿಯಾಗುತ್ತಿದ್ದಾನೆ. ಸಮಯ ಮತ್ತು ಶ್ರಮ ಎರಡೂ ಒಂದೇ ಪ್ರಪಾತಕ್ಕೆ ಬಿದ್ದು, ತನ್ನ ಆಶಯಗಳೆರಡನ್ನೂ ಆ ಪ್ರಪಾತದೊಳಗೆ ಮುಚ್ಚಿ ಹಾಕುತ್ತಿದೆ. ಇದರೊಳಗೆ 'ಆಸಕ್ತಿ' ಮತ್ತು 'ಪ್ರತಿಭೆ' ಎರಡೂ ತನ್ನೆಲ್ಲಾ ಅಸ್ತ್ರಗಳನ್ನು ಕಳಚಿಕೊಂಡು ಗುಮ್ಮನೆ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಇದಕ್ಕೆಲ್ಲಾ ಹೊರದಾರಿಗಳನ್ನು ಕಂಡುಕೊಳ್ಳದೇ ಹೋದರೆ ಮನುಷ್ಯನ ಹೃದಯ ಮತ್ತು ಮೆದುಳುಗಳೆರಡೂ ಪ್ರವಾಹಕ್ಕೆ ಸಿಲುಕಿ ದಿಕ್ಕಾಪಾಗಬೇಕಾಗುತ್ತದೆ. ಸಮಾಜ ಮತ್ತಷ್ಟು ಯಾಂತ್ರಿಕವಾಗಿ ಬದುಕಿನ ಅಥವಾ ವ್ಯಾಪ್ತಿಯನ್ನು ಬರೀ ಹಣವೊಂದೇ ಆವರಿಸಿಕೊಳ್ಳಬಹುದಾದ ಆತಂಕ ಎಲ್ಲ ಸೃಜನ ಮನಸ್ಸುಗಳ ಎದುರು ಇಂದು ಇದೆ. ಹಾಗಾಗಿ ಸಮಾನ ಮನಸ್ಥಿತಿಯುಳ್ಳ ಯುವ ಮನಸ್ಸುಗಳು ಒಂದೆಡೆ ಸೇರಿ ತನ್ನ ಆಸ್ಥೆ ಮತ್ತು ಪ್ರತಿಭೆಯ ಸಹಾಯದಿಂದ ಬದುಕಿನ ಅನ್ವೇಷಣೆ ಮಾಡುವುದು ಇಂದಿನ ತುರ್ತು. ಈ ಹುಡುಕಾಟದ ಬದುಕನ್ನು ಮತ್ತು ಸಮಾಜವನ್ನು ಮತ್ತೆ ಕಟ್ಟುವ ಕ್ರಿಯೆ ನಿರಂತರವಾಗಿ ಆಗಬೇಕು. ಹಿಂದೆ ಆಗಿದ್ದು ಇದೆ. ಮುಂದೆ ಆಗಬೇಕಿರುವುದು ಇದೆ. ಏಕೆಂದರೆ ಏಕಮುಖತೆಯಿಂದ ಬಹುತ್ವದ ಎದುರು ಸಮಾನಮನಸ್ಕರರು ತೆರೆದುಕೊಂಡಾಗ ಗುರಿ ತಲುಪುವುದು ಸುಲಭವಾಗುತ್ತದೆ. ಮೊದಲು ಹೇಳಿದ ಜಾಗತಿಕ ಕಾರಣಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ, ಯಾವುದು ನಮಗೆ ಬೇಕು? ಎಷ್ಟು ಬೇಕು? ಯಾಕೆ ಬೇಕು? ಎಲ್ಲವನ್ನೂ ಗ್ರಹಿಸಿ ಜಾಗೃತರಾಗಿ ಇಂದಿನ ಮನುಷ್ಯ ಮತ್ತು ಬದುಕಿನ ನಡುವಿನ ಅಂತರವನ್ನು ಗ್ರಹಿಸಿಕೊಳ್ಳುವ ಜರೂರು ಕೂಡ ಈ ಹೊತ್ತಿನಲ್ಲಿ ಯೋಚಿಸಬೇಕಾಗಿರೊ ವಿಷಯವೆಂದು ಅನಿಸುತ್ತದೆ.
ಮನುಷ್ಯನ ಸೃಜನಶೀಲ ವ್ಯಾಪಾರಕ್ಕೆ ತುಂಬಾ ಆಪ್ತವಾಗಿ ಮನಸ್ಸು ತೆರೆದುಕೊಳ್ಳುವುದು ಸಾಹಿತ್ಯದಿಂದ. ಸೃಜನ, ಸೃಜನೇತರ ಅಕ್ಷರ ಮಾಧ್ಯಮದಿಂದ ಸಮಾಜಮುಖಿಯಾಗಿ ಬದುಕಿನ ಮತ್ತು ವ್ಯವಸ್ಥೆಯ ಅರ್ಥಗಳನ್ನು ಕಂಡುಕೊಳ್ಳುವುದೂ ಕೂಡಾ ಸಾಹಿತ್ಯ ಮಾರ್ಗದಿಂದಲೇ. ಹಾಗೆಂದ ಮಾತ್ರಕ್ಕೆ ಸೃಜನಶೀಲತೆಯ ಫಲಿತಗಳಾದ ಸಂಗೀತ, ನಾಟಕ, ಚಿತ್ರಕಲೆ, ನೃತ್ಯ, ಛಾಯಾಚಿತ್ರಗ್ರಹಣ, ಸಿನೆಮಾ ಇತ್ಯಾದಿಗಳು ಹೊರಪರಿಧಿಯಲ್ಲಿದೆ ಅಂತಲ್ಲ, ಅವುಗಳು ಕೂಡ ಬದುಕಿನ ಸಂಪನ್ಮೂಲ ಮಾರ್ಗಗಳೇ. ಆದ್ರೆ ಈ ಫಲಿತಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಸಾಹಿತ್ಯ ಜೊತೆಯಾಗಿರುತ್ತದೆ. ಸಾಹಿತ್ಯದ ಕೊಂಡಿ ಭಾಷೆ. ಸಾಹಿತ್ಯಿಕ ಅಂಶಗಳನ್ನು ಬಳಸಿಕೊಂಡು ಭಾಷೆಯ ಮಾಧ್ಯಮವಾಗಿಸಿಕೊಂಡು ಭಾವನೆಗಳನ್ನು, ವಿಚಾರಗಳನ್ನು ಅಸ್ಥಿತ್ವಕ್ಕೆ ತರುವುದು 'ಕಾಜಾಣ’ ದ ಆಶಯ. ಈ ಮೊದಲು ಹೇಳಿದ ಎಲ್ಲ ಅಂಶಗಳೂ ಕೂಡಾ ವೇದಿಕೆಯನ್ನ ಬೇರೆ ಬೇರೆ ಮಗ್ಗಲುಗಳಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವುದಂತೂ ಖಂಡಿತ.
ಇಂದು ಕನ್ನಡ ಸಾಹಿತ್ಯ ಹಲವು ಮಜಲುಗಳನ್ನು ದಾಟಿ ಆಧುನಿಕೊತ್ತರದ ಸಂದರ್ಭದಲ್ಲಿ ಸಂವಾದಿಯಾಗುತ್ತಿದೆ. ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಕಾಲಘಟ್ಟಗಳನ್ನು ಮೇಳೈಸಿಕೊಂಡು ಇಂದು ಸಾಹಿತ್ಯ ಪ್ರತಿಕ್ರಿಯಿಸುತ್ತಿದೆ ಎನ್ನಬಹುದು. ಅಂದರೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಸಂದರ್ಭಗಳ ಸಾರವನ್ನು ಹೀರಿಕೊಂಡು ಹೊಸದೊಂದನ್ನು ಕೊಡುವ ನಿಟ್ಟಿನಲ್ಲಿ ಇಂದಿನ ಸಾರಸ್ವತಲೋಕ ಮುಂದಾಗಿದೆ. ಆ ದಾರಿಯನ್ನು ಹುಡುಕುತ್ತಲೂ ಇದೆ. ಇದೇ ದಾರಿಯಲ್ಲಿ ಮೇಲೆ ಹೇಳಿದ ಎಲ್ಲ ಪ್ರಕಾರಗಳನ್ನು ಜೊತೆಯಲ್ಲಿಟ್ಟುಕೊಂಡು ಕಾಜಾಣ ಕಾರ್ಯ ನಿರ್ವಹಿಸುತ್ತದೆ.
ಎಲ್ಲ ಬರೆಯುವ ಮತ್ತು ಕಲಾ ಮನಸ್ಸುಗಳು ಬುದ್ದಿ ಭಾವಗಳ ಸಂಯೋಗದೊಂದಿಗೆ ಮೆದುಳಿನ ತಾಲೀಮಿಗೆ ತಯಾರಿಗಿದ್ದೇವೆ.ಸಾಹಿತ್ಯವನ್ನು ಮುಖ್ಯವಾಹಿನಿಯಾಗಿಸಿಕೊಂಡು ಅದರ ಫಲಿತಗಳೊಡನೆ ಪ್ರಸ್ತುತದಲ್ಲಿ ಮುಖಮುಖಿಯಾಗುವುದು, ಭೂತದ ಪರಿಜ್ಞಾನದೊಂದಿಗೆ ಭವಿಷ್ಯವನ್ನು ಎದುರುನೋಡುವುದು ನಮ್ಮೆಲ್ಲರ ಬಹುಮುಖ್ಯ ಆಶಯವಾಗಿದೆ.ಇದರೆಲ್ಲದರ ಒಟ್ಟು ಹಿಡಿಗಂಟಾಗಿ ನಮಗೆ ಸಿಕ್ಕಿದ್ದು 'ಕಾಜಾಣ'. ಅದರ ಪ್ರೋತ್ಸಾಹ, ಪ್ರೇರಣೆ, ಪ್ರಭಾವ, ಪರಿಣಾಮ, ಜವಾಬ್ದಾರಿ ಎಲ್ಲವೂ ಎಲ್ಲಾ ಯುವಮನಸ್ಸುಗಳ ಮೇಲೆ ಇದೆ. ಹೊಸಕನಸುಗಳು ಗರಿಬಿಚ್ಚಿಕೊಳ್ಳುತ್ತಾ ಬರವಣೆಗೆ, ಚಿಂತನೆ, ಆಲೋಚನೆ, ಪ್ರತಿಭೆ, ಓದು, ಚರ್ಚೆಯೊಂದಿಗೆ ದಾರಿಗಳನ್ನು ತೆರೆದುಕೊಂಡು ಹೊಸದಾರಿಯ ಅನ್ವೇಷಣೆ 'ಕಾಜಾಣ'ದ ಮುಂದೆ ಇರುವ ಬಹುದೊಡ್ಡ ಜವಾಬ್ದಾರಿ. ಈ ಕಾಜಾಣದ ಉಸ್ತುವಾರಿಗೆ ಬಳಗದ ಎಲ್ಲಾ ಯುವ ಮನಸ್ಸುಗಳೂ ಉಮೇದುದಾರರೆ.
ಕಾಜಾಣದ ಜೊತೆ ಹೆಜ್ಜೆಹಾಕಲು ಜೀವನಪ್ರೀತಿ ಎಂಬ ಅರ್ಹತೆಯೊಂದೇ ಬೇಕಿರುವುದು. ಅರ್ಹತೆಗಳದ್ದಲ್ಲಿ ಬದ್ದತೆಗಳು ಸದಾ ಜೊತೆಗಿರುತ್ತವೆ ಎಂದು ಸ್ಪಷ್ಟವಾಗಿ ಭಾವಿಸುತ್ತೇನೆ. ಈ ಎಲ್ಲಾ ನೆಲೆಗಳಲ್ಲಿ ಕಾಜಾಣದ ಕಣ್ಣುಗಳಲ್ಲಿ ಭಾವದ, ಅನುಭಾವದ ವಾಸ್ತವಗಳನ್ನು ತೆರೆದು ತೋರುವ ಅದರೊಂದಿಗೆ ಬದುಕನ್ನು ಬದುಕಿನಂತೆ ನೋಡುವುದು ಅಗತ್ಯವಾಗಿದೆ. ಇದೆಲ್ಲಾ ಒಂದು ಏರ್ಪಾಡಾಗದೇ ತನಗೆ ತಾನೇ ಮಾರ್ಪಾಡಾಗಿಸುವುದು ಸದ್ಯಕ್ಕೆ ಆಗಬೇಕಿರುವುದು.
‘ಕಾಜಾಣ’ ಕಲೆ ಸಾಹಿತ್ಯದ ಅನಾವರಣಕ್ಕೆ, ಯುವಕರಲ್ಲಿ ಇರುವ ಸಾಹಿತ್ಯ ಇನ್ನಿತರ ಸೃಜನ ಕಲೆಗಳಲ್ಲಿನ ಪ್ರತಿಭೆ ಮತ್ತು ಆಸಕ್ತಿಗಳಿಗೆ ವೇದಿಕೆಯಾಗುವ ಸಲುವಾಗಿ ಕಟ್ಟಿಕೊಂಡ ಉತ್ಸಾಹಿ ಯವಕರೇ ಕಟ್ಟಿಕೊಂಡ ಗುಂಪು. ಇದು ಗುಂಪು ಅಂತ ಅನ್ನಿಸಿಕೊಂಡರೂ ಸದಾ ಕೆಲಸ ಮಾಡುವುದು ಬಯಲಿನ ಆಶಯ ಉಳ್ಳ ಅನೇಕರಿಗೆ. ಎಲ್ಲೂ ವ್ಯಕ್ತಿ ನಿಷ್ಟವಾಗಿ ದುಡಿಯದೆ ಉತ್ಸಾಹಿ ಯುವ ಮನಸ್ಸುಗಳ ಸಮಷ್ಟಿ ದೃಷ್ಟಿಯಲ್ಲಿ ಕಾಜಾಣ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದರ ಪರಿಧಿಯೊಳಗೆ ಸಾಹಿತ್ಯ. ಚಿತ್ರಕಲೆ, ಸಂಗೀತ, ಸಿನೆಮಾ, ಫೋಟೋಗ್ರಫಿ , ರಂಗಭೂಮಿ ಹೀಗೆ ಅನೇಕ ಪ್ರಕಾರಗಳೊಟ್ಟಿಗೆ ಇರುವ ಯುವಕರಿಗೆ ಮುಖವಾಣಿಯಾಗಿದೆ.
ಈ ಎಲ್ಲಾ ಆಶಯಗಳನ್ನು ಜಾರಿಗೆ ತರಲು ಮೊದಲು ಅಭಿನಯಕ್ಕೆ ಸಂಭಂದಿಸಿದ ಸಿನೆಮಾ ಶಿಬಿರವನ್ನು ಮತ್ತು ಕಾವ್ಯಕ್ಕೆ ಸಂಭಂದಿಸಿದ ಕಾವ್ಯ ಕಮ್ಮಟವನ್ನು ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ನಾಡಿನ ವಿವಿಧ ಮೂಲೆಗಳಿಂದ ಬಂದ ಆಸಕ್ತರಿಗೆ ಆಯೋಜಿಸಲಾಗಿತ್ತು . ಜೊತೆಗೆ ವರ್ಷಕೊಮ್ಮೆ ಕಾಜಾಣ ಕಾವ್ಯ ಪುರಸ್ಕಾರವನ್ನು ಕೂಡ ಕೊಡ ಮಾಡಲಾಗುತ್ತಿದೆ.
No comments:
Post a Comment